ರಮ್ಯನಿಸರ್ಗದ ಗುಪ್ತತೆಯಿರಲಿ,
ಸಪ್ತಸಾಗರಗಳ ಸುಪ್ತತೆಯಿರಲಿ,
ಭಾವಗಳಿಗೆಟಕದ ನಿರ್ಲಿಪ್ತತೆಯಿರಲಿ,
ಆದರೆ, ನಿರ್ಭಾವುಕಲಾಗದಿರು ಗೆಳತಿ.
ಪೂರ್ಣಚಂದಿರನ ಚೆಲುವಿರಲಿ,
ನಡುರಾತ್ರಿ ಆಗಸದ ಗೆಲುವಿರಲಿ,
ಅಲ್ಲೊಂದಷ್ಟು ತಾರೆಗಳ ಚಿತ್ತಾರವಿರಲಿ.
ಆದರೆ, ಸಿಡುಕಿ-ಗುಡುಗದಿರು ಗೆಳತಿ.
ಕಾನನದ ಕೋಗಿಲೆಯಿಂಚರದ ಇಂಪಿರಲಿ,
ಮುಂಜಾವ ತಂಗಾಳಿಯ ತಂಪಿರಲಿ,
ಹೊಸತನದ ನೈದಿಲೆಯ ಕಂಪಿರಲಿ,
ಆದರೆ, ಬಿರುಗಾಳಿಯಾಗದಿರು ಗೆಳತಿ.
ಗಿರಿಶಿಖರಗಳೆತ್ತರದ ಶ್ರೇಷ್ಟ್ಯವಿರಲಿ,
ಸಾಗರದ ರಸದಾಳದ ಇಷ್ಟವಿರಲಿ,
ರಸಭರಿತ ಭುವಿಯಂತ ಸಹನೆಯಿರಲಿ,
ಆದರೆ, ಸಿಹಿನೀರ ಒರತೆ ಬತ್ತಿಸದಿರು ಗೆಳತಿ.
ಹಳೆತನದ ಬೇರಿನ ಗಡುಸಿರಲಿ,
ಹೊಸತನದ ಚಿಗುರಿನ ಫಸಲಿರಲಿ,
ಬೆಳೆದ ಹೆಮ್ಮರದ ನೆರಳ-ಸೊಬಗಿರಲಿ,
ಆದರೆ, ಜಡಿಮಳೆಗೂ ಜರಿಯದಿರು ಗೆಳತಿ.
ತುಟಿಯಂಚಿನಲಿ ನಗು-ನಸುಗೆಂಪಗಿರಲಿ,
ಕಣ್ಣಂಚಿನಲಿ ಜಗದೊಲವೆಲ್ಲದರ ಮಂಪಿರಲಿ,
ಬದುಕು-ಭಾವದಲ್ಲೊಂದು ಚಿರ-ಹೊಳಪಿರಲಿ,
ಆದರೆ, ನಿನ್ನಲ್ಲೇ ನೀನು ಮತ್ಸರಿಸದಿರು ಗೆಳತಿ.
~: ೨೦-೦೬-೦೯ರಂದು ಮತ್ಸ್ಯಗಂಧ-ವೆಲ್ಲೋ ಸುರಂಗದೊಳಗೆ ನುಸುಳಿದಾಗ ಮೂಡಿದ ಮನದೆಸಳು.....