Thursday, June 16, 2011

ಪ್ರೀತಿ ಸ(ವ)ರಿದಾಗ.....!!



ಮಾಸಗಳ ಹಿಂದೆ ಮೂಡಿದಾ ಕನಸು,
ಮಾಸದೇ ಉಳಿದರೂ ಆಗದು ನನಸು,
ಮೋಸಹೋದರೂ ಬೇಸರಿಸದೀ ಮನಸು,
ರೋಸಿಹೋದರೂ ಎಮಗಿಲ್ಲ ಮುನಿಸು.

ಹಿಂದು-ಮುಂದಿನ ಜನ್ಮಗಳಲೆಮಗೆ ನಂಬುಗೆಯಿಲ್ಲ,
ಇದು ಇಂದಿನ ಒಮ್ಮತಕೆ ದೇವ ಇಂಬು ಕೊಡಲಿಲ್ಲ,
ಅಂತೆಂದು ಜೀವನದ ಜೀವಕೆ ನೋವ ಕೊಡುವುದಲ್ಲ,
ವಿದಿಯೆಂಬ ಭಾವ ಜೀವದ ನೌಕೆ ನಡೆಸಲೇಬೇಕಲ್ಲ.

ನಾವೊಂದಷ್ಟು ಕಾಲ ಜೊತೆ ಕಿಸಿದಿರಲಿಲ್ಲ,
ಆದರೂ ಒಂದರೆಕ್ಷಣದಲ್ಲೇ ಕಸಿದುಬಿಟ್ಟೆ,
ನಾ ನಿನ್ನ, ಮನಸ-ಕನಸ ಬೆಸೆದುಬಿಟ್ಟೆ,
ಹೊತ್ತು ಮೂಡುವ ಮುಂಚೆ ಎಸೆದುಬಿಟ್ಟೆ.

ನಾ ನಿನಗೆ, ನೀ ನನಗೆ ಎಂದು
ವರುಷ ವರುಷ ನಡೆಯಲಿಲ್ಲ.
'ನಾವಲ್ಲದೇ ಬಾಳಲ್ಲ'ವೆಂಬುದಕ್ಕೆ
ನಿಮಿಷವೂ ಬೇಕಿರಲಿಲ್ಲ.

‘ಇದು ಕೊನೆ’ ಎಂಬುದಕೆ ತಿರುಳಿಲ್ಲ,
ಕಾಯುವಿಕೆಯಲ್ಲಿ ಹುರುಳಿಲ್ಲ, ಆದರೂ
ಕಾದು ಕಾಯುವುದೇ ನಾ ಇರುಳೆಲ್ಲ,
ಕಾತರತೆಗೆ ಮರ್ಮವಿಲ್ಲ-ಮರುಳೆಲ್ಲ.

ಮನದ ಮೂಲೆಯಲಿ ಮಿಣುಕು
ಮಿಂಚೊಂದು ಅಣಕಿಸುವುದು,
ಇನ್ನೂ ಕಾಲ ಮಿಂಚಿಲ್ಲ,
ನೋಡು ಪುಟ್ಟ, ಆಸೆಗೆ ಅಂಚಿಲ್ಲ.
                                          ~: ............. :~
{ ಹೀಗೊಂದು ಕವನ ಯಾಕೆ  ಗೀಚಬೇಕಾಯಿತೋ ಗೊತ್ತಿಲ್ಲ....
ಅರ್ಥವಾಗದಿದ್ದರೆ  ಅರ್ಥ ಕೇಳಬೇಡಿ, ನನಗೂ ಗೊತ್ತಿಲ್ಲ..
ಕ್ಷಮೆಯಿರಲಿ..}