Showing posts with label ಕವನ. Show all posts
Showing posts with label ಕವನ. Show all posts

Sunday, October 2, 2011

ಹೊಸಭಾವ...

ಈ ಭಾವನೆಗಳೇ ಹಾಗೆ ಬಯಕೆಗಳ ಕಂತೆ,
ಸಾಗರನೊಡಲ ಅಲೆಗಳಂತೆ...
ಏಳುತ್ತಲೇ ಇರುತ್ತವೆ ಮತ್ತೆ ಮತ್ತೆ....

ಒಂದೊಮ್ಮೆ ಕಿರಿದು, ಮತ್ತೊಮ್ಮೆ ಹಿರಿದು,
ಅದೇನಿದ್ದರೂ ಆಗದೆಂದೂ ಬರಿದು...
ಬಂದೇ ಬರುತ್ತೆ ನೆನಪ ಕಂತೆ ಉರಿದು..

ಅವು ಒಂದಷ್ಟು ದಡಮುಟ್ಟುತ್ತವೆ...
ಒಂದಷ್ಟು ಹೊಸಕನಸ ಕಟ್ಟುತ್ತವೆ..
ಒಂದಿಷ್ಟು ಮನಸ ತಟ್ಟುತ್ತವೆ..

ಮನದ ತುಂಬಾ ಆಸೆಗಳ ಒರತೆ..
ಕಾಣುವ ಕಣ್ಗಳ ಕನಸುಗಳಿಗೆಲ್ಲಿ ಕೊರತೆ..
ಭರತ-ಇಳಿತಗಳು ಅದರಲ್ಲೂ ಇರುತ್ತೆ.

Tuesday, September 20, 2011

ಮುಂಜಾನೆಯ ಸೃಷ್ಟಿ

ಅಂದು ನಾ ನಿನ್ನ ಬರಮಾಡಿಕೊಳ್ಳುವ
ತವಕದಲ್ಲಿ ತನು
ಮನ-ಮನೆಗಳ ಬಾಗಿಲು
ಮುರಕೊಂಡೆ.....
ಇಂದೆನ್ನ ಮನೆಗೆ ಬಾಗಿಲಿಲ್ಲ...
ಮೊರೆವ ಗಾಡಾಂಧಕಾರದ
ಕಾಣದ ಕಾನನನೆಡೆಯಲ್ಲಿ
ಒಂಟಿಮನೆಯೆನ್ನದು...
ಕೊರೆವ ಚಳಿಯಲ್ಲಿ
ಸುರಿವ ಬರಮಳೆಗೆ...
ಮುರುಕಲು ಮನೆಯ
ಅದ್ಯಾವುದೋ ಅಂಚಲ್ಲಿ
ಕೊರಕಲು ಕಲ್ಲಮೇಲೆ
ಕೊಕ್ಕರಗಾಲಲ್ಲಿ ಕೂತಿರುವೆ...
ಮನ-ಮನೆಗಳಿಗೆ ಹಂಚಿಲ್ಲ...


ಅಂದೊಮ್ಮೆ ಹೇಳಿದ್ದಿ ನೀ
'ಇನ್ನೂ ಕಾಲ ಮಿಂಚಿಲ್ಲ'
ಹುಂ.. ಇಂದದಕೆ ಅರ್ಥವಿಲ್ಲ...
ಕನಸುಗಳೆಲ್ಲ ವ್ಯರ್ಥ...
ಇಂದು ಈಗಿರುವುದು
ನಡುಗಿಸುವ ಮಿಂಚು ಮಾತ್ರ
ಎನ್ನೆದೆಯ ಗೂಡನ್ನೆ
ಅಡರಿಸುವ..ಬಡಬಡಿಸುವ
ಗುಡುಗುಗಳು ಮಾತ್ರ


ಪ್ರಶ್ನೆಗಳೊಂದಷ್ಟಕ್ಕೆ
ಎಲ್ಲಿಯೂ ಇಲ್ಲದ ಉತ್ತರ..
ಕೇಳಿಕೊಳ್ಳುವುದು...
ಹೇಳಿಕೊಳ್ಳುವುದು...
ನಾ ಯಾರ ಹತ್ತಿರ..?


ಅದೊಂದು ಗೋಡೆಯ
ಮೇಲೊಂದು ಮಿಣುಕು
ಬೆಳಕು ಮೂಡುತ್ತಿದೆಯೇ?!
ವಿಚಿತ್ರ...ಮಿಂಚು
ಮಿಂಚಿದ ಮೇಲೂ
ಮಿಣುಕಿನಾ ಆಸೆಯೇ...?!


ಹಾಳಾದ ಮನಸ್ಸು...
ಅದೂ ನನ್ನದೇ.. ಆದರೂ
ನಾ ಹೇಳಿದಂತಿಲ್ಲ..
ಬೇಡವೆಂದರೂ ಕನಸ
ಕಟ್ಟುತ್ತಿದೆ...


ಮುರಿದ ಬಾಗಿಲ ಸಂದಿನೆಡೆಯಲ್ಲಿ
ಕಾಣುವ ಒಂಟಿಮರದ
ಗೀಜಗನ ಗೂಡು ಅದಕೂ
ಕಾಣಿಸುತ್ತಿದೆ...
ಕನಸ ಪೋಣಿಸುತ್ತಿದೆ...
ಹುಚ್ಚು..ಮುರಿದ ಬಾಗಿಲ
ಯಾರು ತಟ್ಟುತ್ತಾರೆ?
ಅಲ್ಲ..ಅದು ಮಿಣುಕು
ಅಣಕಿಸುತ್ತಿರುವುದಲ್ಲ...
ಹಾಗಾದರೆ..ಅದು??!
ಹೌದು.. ಮನದನ್ನನಿಲ್ಲದ
ಮನೆಗೋಡೆ ನಿಲ್ಲದೆ
ಬಿರುಕು ಬಿಡುತಿಹುದು...


ಕನಸುಗಳು ನೆಲಕಚ್ಚಿ
ಬೆಂದುಹೋಗುವಾ ಸಮಯ
ಬೆಳಕ ನೋಡಿರದ ಮನಕೆ
ನೀ ನಂದು ಹಚ್ಚಿದ್ದ ಹಣತೆ
ನಂದಿಹೋಗುವುದೇ ಗೆಳೆಯಾ?

ಇದು ಇವತ್ತು ಬೆಳಿಗ್ಗೆ ಏಳುವಷ್ಟರಲ್ಲಿ ಮನಸ್ಸಲ್ಲಿ ಮೂಡಿದ ಸಾಲುಗಳು...
ತೋಚಿದ್ದನ್ನು ಬರಿತಾ ಹೋದೆ.. ಸಾದಾರಣ ಯಾವತ್ತೂ ಮಾಡುವ ಒಂದು ಸಲದ ಓದುವಿಕೆ, ಸರಿಪಡಿಸುವಿಕೆ ಯಾವುದೂ ಮಾಡಿಲ್ಲ...
ಮೊತ್ತ ಮೊದಲ ಬಾರಿಗೆ ಅನ್ನಿಸಿದ ಕೂಡಲೇ, ಅದೂ ನೇರವಾಗಿ ಬ್ಲಾಗ್ ಪುಟಕ್ಕೇ ಟೈಪಿಸಿದ್ದೇನೆ...
ಜೊತೆಗೆ ಅದೇನೋ ಅಂತಾರಲ್ಲ- ನವ್ಯ ಕಾವ್ಯಶೈಲಿ ಅಂತ, ಹಾಗೆ ಬರಿಲಿಕ್ಕೆ ಆಗುತ್ತಾ ಅಂತ ನೋಡಿದೆ...ಇದೇನೋ ಆಚೆಗೂ ಅಲ್ಲ ಈಚೆಗೂ ಅಲ್ಲ ಅನ್ನಿಸ್ತಿದೆ...
ಗೆಳೆಯರೊಬ್ಬರು ಈ ಕವನಕ್ಕೆ ಮಾಡಿದ ಪ್ರಥಮ ಪ್ರತಿಕ್ರೀಯೆ-'ಮುಂಜಾನೆಯ ಸೃಷ್ಟಿ' ಅದನ್ನೇ ತಲೆಬರಹವಾಗಿ ಬಳಸಿದ್ದೇನೆ. 

Friday, September 2, 2011

ಕಾಲನಿರ್ಣಯ

ಗೆಳತಿ, ನಿನ್ನ ಮತ್ತೆ ಸೇರುವುದೆಂದು..?
ಅರ್ಥವಿಲ್ಲದ ಪ್ರಶ್ನೆಯಿದಲ್ಲವೇನು...?!
ಬೆಳದಿಂಗಳು ಭೂಮಿಗಿಳಿಯುವುದು,
ಯಾರದಾದರೂ ಒಪ್ಪಿಗೆ ಪಡೆದೇನು?

ಕವಿದಿರುವ ಮೋಡ ಸರಿಯಲಿ,
ಚಂದ್ರ ತನ್ನ ಜೇನ ಸುರಿಯಲಿ.
ಇನ್ನೊಂದಿಷ್ಟು ಭೂಮಿಕಾಯಲಿ
ಅದೆಂದೆಂದು ಕಾಲನಿರ್ದರಿಸಲಿ.

ಬಾಳಿನರ್ಥ...

ನಿನ್ನುಸಿರು ಎನ್ನೆದೆಯೊಳಗಿರಲಿ,
ನೀ ಎನ್ನ ಭಾವಕೆ ಜೀವಸ್ವರ..
ಕೆಡಿಸದಿರು ರಾಗ-ಮೌನ ಯಾಕೆ?
ಎನ್ನುಸಿರ ಇಂಗಿಸದಿರು ಗೆಳತಿ..

ನಿನ್ನೊಲವು ಎನಗೆ ರಸ ಕಮಲ,
ನಿನ್ನಿರುವು ಹೊಸ ರವಿಚೇತನ
ನೀನಿದ್ದೊಡೆ ನವಕುಸುಮ ಬೇಕೆ?
ಎನ್ನೊಲವ ಹಂಗಿಸದಿರು ಗೆಳತಿ..

ಹಾಗೆಹೀಗೆ ಮುನಿಯಬೇಡ ಗೆಳತಿ,
ನೀ ಬರಿ ನನ್ನ ಬಾಳು ಮಾತ್ರವಲ್ಲ...
ನೀ ಎನ್ನ ಬಾಳಿಗರ್ಥ...ಬಾಳನೌಕೆ!
ಆದರದು ನಾ-ನೀ ಬಾಳಿದರೆ ಮಾತ್ರ.

Thursday, June 16, 2011

ಪ್ರೀತಿ ಸ(ವ)ರಿದಾಗ.....!!



ಮಾಸಗಳ ಹಿಂದೆ ಮೂಡಿದಾ ಕನಸು,
ಮಾಸದೇ ಉಳಿದರೂ ಆಗದು ನನಸು,
ಮೋಸಹೋದರೂ ಬೇಸರಿಸದೀ ಮನಸು,
ರೋಸಿಹೋದರೂ ಎಮಗಿಲ್ಲ ಮುನಿಸು.

ಹಿಂದು-ಮುಂದಿನ ಜನ್ಮಗಳಲೆಮಗೆ ನಂಬುಗೆಯಿಲ್ಲ,
ಇದು ಇಂದಿನ ಒಮ್ಮತಕೆ ದೇವ ಇಂಬು ಕೊಡಲಿಲ್ಲ,
ಅಂತೆಂದು ಜೀವನದ ಜೀವಕೆ ನೋವ ಕೊಡುವುದಲ್ಲ,
ವಿದಿಯೆಂಬ ಭಾವ ಜೀವದ ನೌಕೆ ನಡೆಸಲೇಬೇಕಲ್ಲ.

ನಾವೊಂದಷ್ಟು ಕಾಲ ಜೊತೆ ಕಿಸಿದಿರಲಿಲ್ಲ,
ಆದರೂ ಒಂದರೆಕ್ಷಣದಲ್ಲೇ ಕಸಿದುಬಿಟ್ಟೆ,
ನಾ ನಿನ್ನ, ಮನಸ-ಕನಸ ಬೆಸೆದುಬಿಟ್ಟೆ,
ಹೊತ್ತು ಮೂಡುವ ಮುಂಚೆ ಎಸೆದುಬಿಟ್ಟೆ.

ನಾ ನಿನಗೆ, ನೀ ನನಗೆ ಎಂದು
ವರುಷ ವರುಷ ನಡೆಯಲಿಲ್ಲ.
'ನಾವಲ್ಲದೇ ಬಾಳಲ್ಲ'ವೆಂಬುದಕ್ಕೆ
ನಿಮಿಷವೂ ಬೇಕಿರಲಿಲ್ಲ.

‘ಇದು ಕೊನೆ’ ಎಂಬುದಕೆ ತಿರುಳಿಲ್ಲ,
ಕಾಯುವಿಕೆಯಲ್ಲಿ ಹುರುಳಿಲ್ಲ, ಆದರೂ
ಕಾದು ಕಾಯುವುದೇ ನಾ ಇರುಳೆಲ್ಲ,
ಕಾತರತೆಗೆ ಮರ್ಮವಿಲ್ಲ-ಮರುಳೆಲ್ಲ.

ಮನದ ಮೂಲೆಯಲಿ ಮಿಣುಕು
ಮಿಂಚೊಂದು ಅಣಕಿಸುವುದು,
ಇನ್ನೂ ಕಾಲ ಮಿಂಚಿಲ್ಲ,
ನೋಡು ಪುಟ್ಟ, ಆಸೆಗೆ ಅಂಚಿಲ್ಲ.
                                          ~: ............. :~
{ ಹೀಗೊಂದು ಕವನ ಯಾಕೆ  ಗೀಚಬೇಕಾಯಿತೋ ಗೊತ್ತಿಲ್ಲ....
ಅರ್ಥವಾಗದಿದ್ದರೆ  ಅರ್ಥ ಕೇಳಬೇಡಿ, ನನಗೂ ಗೊತ್ತಿಲ್ಲ..
ಕ್ಷಮೆಯಿರಲಿ..}

Sunday, December 5, 2010

ಆ ಎರಡು ಕವನಗಳು :~

ಗೆಳತಿಗೆ.....

ದೂರವಾಗಬಲ್ಲೆ ನೀ ಗೆಳತಿ

ನನ್ನ ಸಾಮಿಪ್ಯದಿಂದ ಮಾತ್ರ.

ದೂರವುಳಿಯಲಾರೆ ನೀ ಗೆಳತಿ

ಎಂದೆಂದೂ ನನ್ನ ಹೃದಯದಿಂದ

ಬಾನಲ್ಲಿ ಇರುವವರೆಗೆ-ನಕ್ಷತ್ರ||


ಜೊತೆಯಾಗಿರಲು ನನ್ನ ನೀ ಗೆಳತಿ,

ಕಾಲ ಬಿಡದಿರಬಹುದು ಈಗ.

ಚಿಂತಿಸದಿರು ನಾ ಮರೆಯಲಾರೆ

ನಿನ್ನ, ನೀ ಜೊತೆಗಿಲ್ಲವೆಂದು

ಭುವಿ-ರವಿ-ಚಂದ್ರರಿರುವಾಗ||


ನೀ ನನ್ನ ಜೊತೆಯಲ್ಲೇ ಇರುವೆ

ನನ್ನೆದೆಯ ಗೂಡಿನಲಿ ಭದ್ರವಾಗಿ.

ನನ್ನಾಣೆ, ನಿನ್ನಾಣೆ ಗೆಳತಿ ನೀ ಎಂದೂ

ನೀನಲ್ಲಿಯೇ ಇರುವೆ, 'ಇದು ಖಂಡಿತ'

ಒಡೆವವರೇಗೆ ನನ್ನೆದೆ ಛಿದ್ರವಾಗಿ||


ಜೊತೆಯಾಗಿರಲು ಬಿಡದು ಮುಂದೆ

ಸಮಾಜದ ದುರ್ನೀತಿ-ರೀತಿಗಳು.

ಅವಕರ್ಥವಾಗದು-'ಸ್ನೇಹದ ಬೆಲೆ'

ಜಾತಿ-ನೀತಿ-ಸಂಪತ್ತುಗಳೇ, ಅವಕೆ

ಕಾಣಿಸುವುದು-ಹಗಲಿರುಳು||


ಕೊನೆಗರ್ಥವಾಯಿತು ಗೆಳತಿ,

ನನಗೀ ಲೋಕದ ಕುರುಡು-ಸತ್ಯ.

ಪ್ರಳಯವಾದೀತು ಜೊತೆಯಿರಲು

ನಾವು, ನಾ ಭುವಿಯಾಗಿರಲು

ನೀ ತಾರೆಯಾಗಿರಲು ನಿತ್ಯ||


ಗೆಳತಿ ನಾನರಿಯೆ, ನೀ ಹೇಗೆ ನನ್ನಿಂದ

ದೂರ-'ಉಳಿಯ'ಬಲ್ಲೆಯೆಂದು.

ನಾ ಬೆಂಕಿಯಾಗಿ, ನೀ ನೀರಾಗಿರಲು,

ಬಹುಶಃ ನಾವು ಜೊತೆಯಾಗಿದ್ದು,

ಆಗ ನಾನಿಲ್ಲದಾಗಬಾರದೆಂದು||


ನೀ'ನೊಂದು' ದಡವಾಗಿರಲು

ನಾನೊಂದು ದಡವಾಗಿರುವುದೆಂತು?

ಆದರೂ ದಡಗಳೊಂದಾದರೆ

ನಡುವೆ ನಮ್ಮ ಜೀವನದ

ನದಿ ಹರಿಯುವುದೆಂತು?||


ಚಂದ್ರ ಸಮುದ್ರಕ್ಕಿಳಿಯದ

ಮಾತ್ರಕ್ಕೆ ಸ್ನೇಹವಿಲ್ಲವೇನು?

'ಆತನಿಳಿದು ಬರಲಿಲ್ಲ'ವೆಂಬ ಮಾತ್ರಕ್ಕೆ

ಆತ ಬರುವುದ ನೋಡಿ, ಅದು

ಉಕ್ಕುವುದ ಮರೆತಿರುವುದೇನು?||


ನಿನಗಿದು ವಿಚಿತ್ರವೆನಿಸಬಹುದು-

ಆದರೂ ನನ್ನ ಸಲಹೆಯಿದು,

ನಾ ಒಳಿತೆಸಗಿದೊಡೆ, ನೀನೂ

ಒಳಿತೆಸಗು, ಸ್ವರ್ಗವೆಂಬುದಿರೆ

ಅಲ್ಲಿ ಜೊತೆಯಾಗಿರಬಹುದು||


ನಿನಗಿದು ಬಲು ಕಠಿಣವಿರಬಹುದು,

ಆದರೂ ನನ್ನ ಮನ ಬೇಡುತಿಹುದು.

ನಾ ಕೆಡುಕೆಸಗಿದೊಡೆ, ನೀನೂ.....

ಕೆಡುಕೆಸಗಲಾರೆಯಾ..?! ನರಕವಿದ್ದರೆ

ಅಲ್ಲಿಯಾದರೂ ಜತೆಗಿರಬಹುದು||


ಮುಂದೊಮ್ಮೆ ಜನ್ಮವಿರೆ ಗೆಳತಿ,

ನೀ ಗಂಡಾದರೆ, ನಾ ಗಂಡಾಗುವೆನು.

ನಿನ್ನ ನೆರೆಮನೆಯಲ್ಲಿಯೇ, ಮತ್ತೆ

ಜನಿಸುವೆನು, ದೂರಹೋಗದುಳಿವೆ

ಪ್ರಾರ್ಥಿಸು(ವೆ) ದೇವರಿರುವನು||



ಗೆಳತಿಯ ನೆನಪಿನಲ್ಲಿ.....

ಗೆಳತಿ,

ನಿನ್ನೊಂದಿಗೆ ಕಳೆದ

ಸುಂದರದಿನಗಳ

ಬರುವುದು

ನೆನಪು

ಕೆಲವೊಮ್ಮೆ ನಗು

ಕೆಲವೊಮ್ಮೆ ಜಗಳ

ಕೆಲವೊಮ್ಮೆ ಹುಸಿ

ಮುನಿಸು

ಈಗ ನೀನು

ಹತ್ತಿರವಿಲ್ಲ

ಆದರೂ ಕಾಯುತ್ತಿದ್ದೇನೆ-

ನೀನು ಹಿಂತಿರುಗಿ

ಬರುವೆಯಲ್ಲ?

ನಿನಗೆ ನೆನಪಿದೆಯಾ

ಗೆಳತಿ

ನಾವು ಸುತ್ತಾಡಿದ

ಸ್ಥಳಗಳು

ಎಷ್ಟೊಂದು ಮಧುರ

ದಿನಗಳು.

ನಮ್ಮ ಸ್ನೇಹ ನೋಡಿ

ಎಷ್ಟು ಜನ

ಕರುಬಿದ್ದರು

ಎಷ್ಟು ಜನ

ಅನುಮಾನದ

ಬಹುಮಾನ

ಕೊಟ್ಟಿದ್ದರು.

ಬಹಳಷ್ಟು

ಜನ ಪ್ರೇಮದ

ಪಟ್ಟ ಕಟ್ಟಿದ್ದರು.

ಪ್ರಪಂಚಕ್ಕೆ

ಗಂಡು ಹೆಣ್ಣಿನ

ಸ್ನೇಹ ಸಂಬಂಧ ತಿಳಿಯದು

ಗೆಳತಿ

ಅದಕ್ಕೆಂದೂ ಕಾಣುವುದು

ಬರೇ ಪ್ರೇಮ-ಕಾಮ.

ಅದೇನಿದ್ದರೂ ನೋದುವುದು

ಒಂದೇ ರೀತಿ....

ಯಾರು ಏನೇ ಅನ್ನಲಿ,

ಅಂದುಕೊಳ್ಳಲಿ...

ನಮ್ಮ ಸ್ನೇಹ

ನಿತ್ಯ ನೂತನ

ನಿತ್ಯ ಚೇತನ

ಅದೇ ನನ್ನ ಜೇವನಕ್ಕೆ

ಸ್ಪೂರ್ತಿಯ

ಸಿಂಚನ.


ಮೇಲಿನೆರಡು 'ಕವನ'ವೆನ್ನಿಸುವವುಗಳನ್ನು ಒಮ್ಮೆ ಓದಿನೋಡಿ, ಕವನದಲ್ಲೇನು ವಿಶೇಷವಿಲ್ಲ. ಅದನ್ನು ಗೀಚಿದ್ದು ನನ್ನ ಪ್ರಥಮ ಪದವಿಯ ಆರಂಭದ ದಿನಗಳಲ್ಲಿ. ಇತ್ತೀಚೆಗೆ ಏನೋ ಹಳೇ ಪುಸ್ತಕಗಳೆಡೆಯಲ್ಲಿ ಹಾಳೆಯೊಂದು ಸಿಕ್ಕಿತು. ಅದರಲ್ಲಿ ಎರಡು ಕವನಗಳಿದ್ದುವು- ಒಂದು ನಾನು ಬರೆದುದು, ಎರಡನೆಯದ್ದು ನನ್ನ ಸ್ನೇಹಿತನದ್ದು, ಎರಡೂ ಪ್ರತ್ಯೇಕವಾಗಿ ಒಂದನ್ನೊಂದು ನೋಡದೇ ಪೂರ್ಣ ಸ್ವಂತವಾಗಿ ಮೂಡಿಬಂದುವಾದರೂ, ಎರಡರದ್ದೂ ಮೂಲಸಾರ ಒಂದೇ, ವಿಷಯವೂ ಒಂದೇ ಅದನ್ನಾತ ತೋರಿಸಿದ್ದಾಗ ನಾನು ಗರಬಡಿದವನಂತೆ ನಿಂತಿದ್ದೆ ಆದಿನ, ನನ್ನದಕ್ಕಿಂತಲೂ ಆತನ ಕವನವೇ ನನಗೆ ಹೆಚ್ಚು ಇಷ್ಟವಾಯಿತು........ ಅಂದ ಹಾಗೆ ಇದು ನನ್ನ ಮೊತ್ತ ಮೊದಲ ಕವನ.

ಅಂದಹಾಗೆ ಅವನೂ ಸಾಲುಗಳನ್ನ ಅದೇ ಹಾಳೆಯ ಮೇಲೆ ಪೋಣಿಸಿದ ಮೇಲೆ, ನಾನು ಕೆಳಗೆ ಬರೆದಿದ್ದೆ...

ವ್ಯತಾಸ ಇಷ್ಟೇ.... ನಂದೊಂತರಾ ಪಲಾಯನ ಧೊರಣೆಯಾದರೆ... ನಿಂದೊಂತರಾ daringness ಕಣೋ..

Friday, July 17, 2009

ನಿನ್ನ ಪ್ರೀತಿಯಲಿ.....(?!)

ರಮ್ಯನಿಸರ್ಗದ ಗುಪ್ತತೆಯಿರಲಿ,
ಸಪ್ತಸಾಗರಗಳ ಸುಪ್ತತೆಯಿರಲಿ,
ಭಾವಗಳಿಗೆಟಕದ ನಿರ್ಲಿಪ್ತತೆಯಿರಲಿ,
ಆದರೆ, ನಿರ್ಭಾವುಕಲಾಗದಿರು ಗೆಳತಿ.

ಪೂರ್ಣಚಂದಿರನ ಚೆಲುವಿರಲಿ,
ನಡುರಾತ್ರಿ ಆಗಸದ ಗೆಲುವಿರಲಿ,
ಅಲ್ಲೊಂದಷ್ಟು ತಾರೆಗಳ ಚಿತ್ತಾರವಿರಲಿ.
ಆದರೆ, ಸಿಡುಕಿ-ಗುಡುಗದಿರು ಗೆಳತಿ.

ಕಾನನದ ಕೋಗಿಲೆಯಿಂಚರದ ಇಂಪಿರಲಿ,
ಮುಂಜಾವ ತಂಗಾಳಿಯ ತಂಪಿರಲಿ,
ಹೊಸತನದ ನೈದಿಲೆಯ ಕಂಪಿರಲಿ,
ಆದರೆ, ಬಿರುಗಾಳಿಯಾಗದಿರು ಗೆಳತಿ.

ಗಿರಿಶಿಖರಗಳೆತ್ತರದ ಶ್ರೇಷ್ಟ್ಯವಿರಲಿ,
ಸಾಗರದ ರಸದಾಳದ ಇಷ್ಟವಿರಲಿ,
ರಸಭರಿತ ಭುವಿಯಂತ ಸಹನೆಯಿರಲಿ,
ಆದರೆ, ಸಿಹಿನೀರ ಒರತೆ ಬತ್ತಿಸದಿರು ಗೆಳತಿ.

ಹಳೆತನದ ಬೇರಿನ ಗಡುಸಿರಲಿ,
ಹೊಸತನದ ಚಿಗುರಿನ ಫಸಲಿರಲಿ,
ಬೆಳೆದ ಹೆಮ್ಮರದ ನೆರಳ-ಸೊಬಗಿರಲಿ,
ಆದರೆ, ಜಡಿಮಳೆಗೂ ಜರಿಯದಿರು ಗೆಳತಿ.

ತುಟಿಯಂಚಿನಲಿ ನಗು-ನಸುಗೆಂಪಗಿರಲಿ,
ಕಣ್ಣಂಚಿನಲಿ ಜಗದೊಲವೆಲ್ಲದರ ಮಂಪಿರಲಿ,
ಬದುಕು-ಭಾವದಲ್ಲೊಂದು ಚಿರ-ಹೊಳಪಿರಲಿ,
ಆದರೆ, ನಿನ್ನಲ್ಲೇ ನೀನು ಮತ್ಸರಿಸದಿರು ಗೆಳತಿ.

~: ೨೦-೦೬-೦೯ರಂದು ಮತ್ಸ್ಯಗಂಧ-ವೆಲ್ಲೋ ಸುರಂಗದೊಳಗೆ ನುಸುಳಿದಾಗ ಮೂಡಿದ ಮನದೆಸಳು.....

Wednesday, July 15, 2009

ಬಯಕೆಗಳ ಮೀರಿ ಹಾರು......!!!

ಹಾರು ಹಕ್ಕಿಯೇ ಹಾರು ಬಾನೆತ್ತರಕೆ,
ಹಾರು, ಮುಗಿಲ ಮೇಲೇರಿ ಹಾರು,
ಹಿಂತಿರುಗಿ ನೋಡದಿರು, ಹಾರು ರವಿಯೆಡೆಗೆ,
ನಿನ್ನಾಸೆಗಳ ಗರಿಬಿಚ್ಚಿ, ಮನಮೆಚ್ಚಿ ಹಾರು,
ಆದರೂ...., ಗೂಡ ಮರೆಯಬೇಡ...!
ನೀನುಂಡ ಕಾಡ ಮರೆಯಬೇಡ.......!!
ನೀನಾಡಿದ ನಾಡ ಮರೆಯಬೇಡ.....!!!
ನೀಮಿಂದ ತೋಡ ಮರೆಯಬೇಡ....!!!!

ಹಾರು ಹಕ್ಕಿಯೇ ಹಾರು ದಿಗಂತದಾಚೆಗೆ,
ಹಾರು, ಗುಡ್ಡ-ಬೆಟ್ಟಗಳ ಮೀರಿ ಹಾರು,
ನೋವುಗಳೆಲ್ಲವ ಮರೆತು ಹಾರು, ಕಡಲದಾಟಿ,
ಮಧುರಭಾವನೆಗಳ ಮಾತ್ರ, ಹೃದಯಮೀಟಿ,
ಆದರೂ...... ನಿನ್ನವರ ಮರೆಯಬೇಡ...!
ತುತ್ತನಿತ್ತವರ ಮರೆಯಬೇಡ...............!!
ನಿನ್ನ ನೋವಿಗತ್ತವರ ಮರೆಯಬೇಡ.....!!!
ನಿನ್ನ ಹೊತ್ತವಳ, ಹೆತ್ತವರ ಮರೆಯಬೇಡ!!!!

ನೀನಿಂದು ಉಬ್ಬಿರಬಹುದು, ಕೊಬ್ಬಿರಬಹುದು,
ಹೊಸಲೋಕದೊಳಗೊಬ್ಬನಾಗಿ ಉಳಿಯಬಹುದು,
ಆದರೂ ಮರೆಯದಿರು-ನೀನಲ್ಲಿ "ಪರಕೀಯ".....!
ಹೊಸಲೋಕದಲ್ಲೆಂದೂ ನೀನು "ಹೊಸಬ"......!!
ಮುಂದೊಮ್ಮೆ ಮನಬಿಚ್ಚಿ ಹಾರಬಹುದು,
ಈ ಭುವಿಯೆಡೆಗೆ, ದಿಗಂತದೀಚೆಗೆ,
ಅದಕ್ಕಾದರೂ ಈ ಗೂಡ ಮರೆಯದಿರು,
ಈ ಕಾಡು, ಗೂಡು ನಿನಗಾಗಿ ಕಾಯುವುದು!!

~:ಇದು
ಮನೆ ಬಿಟ್ಟು ದೇಶ ಬಿಟ್ಟು, ಕೊನೆಗೆ ಕಲಿತ ಮೂಲ ವಿಧ್ಯೆಯನ್ನೂ ಬಿಟ್ಟು ಸುಮ್ನೆ ಜೀವಿಸುತ್ತೇವೆ ಅನ್ನೋ ಮನೋಭಾವದವರಿಗಾಗಿ.....

ಯಾರವಳು....??

ನೆನೆಪಿಸದೆಯೂ ನೆನಪೆದೆಯಲ್ಲಿ ಮೊನಚಾಗಿ ತಿವಿವವಳು?
ನನ್ನ ಜೀವದ ಸವಿಯೆಲ್ಲವ, ನನ್ನದಲ್ಲ-ವೆಂಬಂತೆ ಹೀರಿದವಳು....
ರಸಕಬ್ಬಿನ ಜೀವರಸವೆಲ್ಲವ ಹೀರಿ, ತೊಗಟೆ ಎಂಬಂತೆ ಎಸೆದವಳು
ನೆನೆಗುದಿಗೆ ಬೀಳಿಸಿದರೂ, ನೆನಪಲ್ಲಿ ಮೊದಲಿಗಲಾಗುವವಳು....
ಅವಳಿದ್ದರೆ, ಕಣ್ಣಲ್ಲಿ ಪನ್ನೀರು ಬರುವುದಾದರೂ ಎಂತು?!!!!

ಒಂದೊಮ್ಮೆ ನೆನಪಿಗೇ ಬತ್ತಿಯಾಗಿ,
ಮುಂದೊಮ್ಮೆ ನೆನಪನ್ನೇ ಬತ್ತಿಸಿದವಳು,
ಅಂದು ಮನವನ್ನೇ ಮೌನದ ಬುತ್ತಿಯಾಗಿಸಿ,
ಇಂದು ಮ್ಲಾನದ ತೊಟ್ಟಿಯಾಗಿಸಿದವಳು.

ಬೆಳಕಿಗೇ ಬೆಳಕ ಕಣವಾಗಬೇಕೆಂದಿದ್ದವಳು,
ಇಂದು ಗಾಡ-ಮೌಡ್ಯದ ಮುಸುಕಾಗಿರುವವಳು,
ಬೆಳಕಾಗಿ, ಬೆಳಕನ್ನೇ ಹಿಸುಕಿ-ಹೊಸಕಿದವಳು..?!

ಮನಸ ಗೆದ್ದವಳು, ಕನಸ ಕದ್ದವಳು, ಮೆದುಳ ಮೆದ್ದವಳು,
ಮನಸಿಂದ 'ಮುನಿಸಿ' ಹೊರಬಿದ್ದವಳು,
ಮನಸ್ಸಲ್ಲೇ ಮುದ್ದಿಸಿ, ಎದ್ದುಹೋದವಳು...
ಕನಸಲ್ಲೇ ಕನಸಂತೆ ಕರಗಿಹೋದವಳು,
ಮೆದುಳಿಂದ ಮೆದುವಾಗೇ ಸರಿಯುತ್ತಿರುವವಳು..... (?!)

ಯಾರವಳು...........? ಅವಳು ಅವಳೇ ಏನು....?!


~: ಮೊದಲ ಭಾಗ ಗೆಳತಿಯೋರ್ವೆಯ scrapನಿಂದ ಪ್ರೇರಿತ.
cyberನ ಅವಸರದಲ್ಲಿ ನೇರವಾಗಿ ಗೀಚಿದ್ದು,
ಮುಂದಿನವು....ನೇತ್ರಾವತಿ ಸೇತುವೆ ಮೇಲೆ ಮೂಡಿದ್ದು....