Sunday, December 5, 2010

ಆ ಎರಡು ಕವನಗಳು :~

ಗೆಳತಿಗೆ.....

ದೂರವಾಗಬಲ್ಲೆ ನೀ ಗೆಳತಿ

ನನ್ನ ಸಾಮಿಪ್ಯದಿಂದ ಮಾತ್ರ.

ದೂರವುಳಿಯಲಾರೆ ನೀ ಗೆಳತಿ

ಎಂದೆಂದೂ ನನ್ನ ಹೃದಯದಿಂದ

ಬಾನಲ್ಲಿ ಇರುವವರೆಗೆ-ನಕ್ಷತ್ರ||


ಜೊತೆಯಾಗಿರಲು ನನ್ನ ನೀ ಗೆಳತಿ,

ಕಾಲ ಬಿಡದಿರಬಹುದು ಈಗ.

ಚಿಂತಿಸದಿರು ನಾ ಮರೆಯಲಾರೆ

ನಿನ್ನ, ನೀ ಜೊತೆಗಿಲ್ಲವೆಂದು

ಭುವಿ-ರವಿ-ಚಂದ್ರರಿರುವಾಗ||


ನೀ ನನ್ನ ಜೊತೆಯಲ್ಲೇ ಇರುವೆ

ನನ್ನೆದೆಯ ಗೂಡಿನಲಿ ಭದ್ರವಾಗಿ.

ನನ್ನಾಣೆ, ನಿನ್ನಾಣೆ ಗೆಳತಿ ನೀ ಎಂದೂ

ನೀನಲ್ಲಿಯೇ ಇರುವೆ, 'ಇದು ಖಂಡಿತ'

ಒಡೆವವರೇಗೆ ನನ್ನೆದೆ ಛಿದ್ರವಾಗಿ||


ಜೊತೆಯಾಗಿರಲು ಬಿಡದು ಮುಂದೆ

ಸಮಾಜದ ದುರ್ನೀತಿ-ರೀತಿಗಳು.

ಅವಕರ್ಥವಾಗದು-'ಸ್ನೇಹದ ಬೆಲೆ'

ಜಾತಿ-ನೀತಿ-ಸಂಪತ್ತುಗಳೇ, ಅವಕೆ

ಕಾಣಿಸುವುದು-ಹಗಲಿರುಳು||


ಕೊನೆಗರ್ಥವಾಯಿತು ಗೆಳತಿ,

ನನಗೀ ಲೋಕದ ಕುರುಡು-ಸತ್ಯ.

ಪ್ರಳಯವಾದೀತು ಜೊತೆಯಿರಲು

ನಾವು, ನಾ ಭುವಿಯಾಗಿರಲು

ನೀ ತಾರೆಯಾಗಿರಲು ನಿತ್ಯ||


ಗೆಳತಿ ನಾನರಿಯೆ, ನೀ ಹೇಗೆ ನನ್ನಿಂದ

ದೂರ-'ಉಳಿಯ'ಬಲ್ಲೆಯೆಂದು.

ನಾ ಬೆಂಕಿಯಾಗಿ, ನೀ ನೀರಾಗಿರಲು,

ಬಹುಶಃ ನಾವು ಜೊತೆಯಾಗಿದ್ದು,

ಆಗ ನಾನಿಲ್ಲದಾಗಬಾರದೆಂದು||


ನೀ'ನೊಂದು' ದಡವಾಗಿರಲು

ನಾನೊಂದು ದಡವಾಗಿರುವುದೆಂತು?

ಆದರೂ ದಡಗಳೊಂದಾದರೆ

ನಡುವೆ ನಮ್ಮ ಜೀವನದ

ನದಿ ಹರಿಯುವುದೆಂತು?||


ಚಂದ್ರ ಸಮುದ್ರಕ್ಕಿಳಿಯದ

ಮಾತ್ರಕ್ಕೆ ಸ್ನೇಹವಿಲ್ಲವೇನು?

'ಆತನಿಳಿದು ಬರಲಿಲ್ಲ'ವೆಂಬ ಮಾತ್ರಕ್ಕೆ

ಆತ ಬರುವುದ ನೋಡಿ, ಅದು

ಉಕ್ಕುವುದ ಮರೆತಿರುವುದೇನು?||


ನಿನಗಿದು ವಿಚಿತ್ರವೆನಿಸಬಹುದು-

ಆದರೂ ನನ್ನ ಸಲಹೆಯಿದು,

ನಾ ಒಳಿತೆಸಗಿದೊಡೆ, ನೀನೂ

ಒಳಿತೆಸಗು, ಸ್ವರ್ಗವೆಂಬುದಿರೆ

ಅಲ್ಲಿ ಜೊತೆಯಾಗಿರಬಹುದು||


ನಿನಗಿದು ಬಲು ಕಠಿಣವಿರಬಹುದು,

ಆದರೂ ನನ್ನ ಮನ ಬೇಡುತಿಹುದು.

ನಾ ಕೆಡುಕೆಸಗಿದೊಡೆ, ನೀನೂ.....

ಕೆಡುಕೆಸಗಲಾರೆಯಾ..?! ನರಕವಿದ್ದರೆ

ಅಲ್ಲಿಯಾದರೂ ಜತೆಗಿರಬಹುದು||


ಮುಂದೊಮ್ಮೆ ಜನ್ಮವಿರೆ ಗೆಳತಿ,

ನೀ ಗಂಡಾದರೆ, ನಾ ಗಂಡಾಗುವೆನು.

ನಿನ್ನ ನೆರೆಮನೆಯಲ್ಲಿಯೇ, ಮತ್ತೆ

ಜನಿಸುವೆನು, ದೂರಹೋಗದುಳಿವೆ

ಪ್ರಾರ್ಥಿಸು(ವೆ) ದೇವರಿರುವನು||



ಗೆಳತಿಯ ನೆನಪಿನಲ್ಲಿ.....

ಗೆಳತಿ,

ನಿನ್ನೊಂದಿಗೆ ಕಳೆದ

ಸುಂದರದಿನಗಳ

ಬರುವುದು

ನೆನಪು

ಕೆಲವೊಮ್ಮೆ ನಗು

ಕೆಲವೊಮ್ಮೆ ಜಗಳ

ಕೆಲವೊಮ್ಮೆ ಹುಸಿ

ಮುನಿಸು

ಈಗ ನೀನು

ಹತ್ತಿರವಿಲ್ಲ

ಆದರೂ ಕಾಯುತ್ತಿದ್ದೇನೆ-

ನೀನು ಹಿಂತಿರುಗಿ

ಬರುವೆಯಲ್ಲ?

ನಿನಗೆ ನೆನಪಿದೆಯಾ

ಗೆಳತಿ

ನಾವು ಸುತ್ತಾಡಿದ

ಸ್ಥಳಗಳು

ಎಷ್ಟೊಂದು ಮಧುರ

ದಿನಗಳು.

ನಮ್ಮ ಸ್ನೇಹ ನೋಡಿ

ಎಷ್ಟು ಜನ

ಕರುಬಿದ್ದರು

ಎಷ್ಟು ಜನ

ಅನುಮಾನದ

ಬಹುಮಾನ

ಕೊಟ್ಟಿದ್ದರು.

ಬಹಳಷ್ಟು

ಜನ ಪ್ರೇಮದ

ಪಟ್ಟ ಕಟ್ಟಿದ್ದರು.

ಪ್ರಪಂಚಕ್ಕೆ

ಗಂಡು ಹೆಣ್ಣಿನ

ಸ್ನೇಹ ಸಂಬಂಧ ತಿಳಿಯದು

ಗೆಳತಿ

ಅದಕ್ಕೆಂದೂ ಕಾಣುವುದು

ಬರೇ ಪ್ರೇಮ-ಕಾಮ.

ಅದೇನಿದ್ದರೂ ನೋದುವುದು

ಒಂದೇ ರೀತಿ....

ಯಾರು ಏನೇ ಅನ್ನಲಿ,

ಅಂದುಕೊಳ್ಳಲಿ...

ನಮ್ಮ ಸ್ನೇಹ

ನಿತ್ಯ ನೂತನ

ನಿತ್ಯ ಚೇತನ

ಅದೇ ನನ್ನ ಜೇವನಕ್ಕೆ

ಸ್ಪೂರ್ತಿಯ

ಸಿಂಚನ.


ಮೇಲಿನೆರಡು 'ಕವನ'ವೆನ್ನಿಸುವವುಗಳನ್ನು ಒಮ್ಮೆ ಓದಿನೋಡಿ, ಕವನದಲ್ಲೇನು ವಿಶೇಷವಿಲ್ಲ. ಅದನ್ನು ಗೀಚಿದ್ದು ನನ್ನ ಪ್ರಥಮ ಪದವಿಯ ಆರಂಭದ ದಿನಗಳಲ್ಲಿ. ಇತ್ತೀಚೆಗೆ ಏನೋ ಹಳೇ ಪುಸ್ತಕಗಳೆಡೆಯಲ್ಲಿ ಹಾಳೆಯೊಂದು ಸಿಕ್ಕಿತು. ಅದರಲ್ಲಿ ಎರಡು ಕವನಗಳಿದ್ದುವು- ಒಂದು ನಾನು ಬರೆದುದು, ಎರಡನೆಯದ್ದು ನನ್ನ ಸ್ನೇಹಿತನದ್ದು, ಎರಡೂ ಪ್ರತ್ಯೇಕವಾಗಿ ಒಂದನ್ನೊಂದು ನೋಡದೇ ಪೂರ್ಣ ಸ್ವಂತವಾಗಿ ಮೂಡಿಬಂದುವಾದರೂ, ಎರಡರದ್ದೂ ಮೂಲಸಾರ ಒಂದೇ, ವಿಷಯವೂ ಒಂದೇ ಅದನ್ನಾತ ತೋರಿಸಿದ್ದಾಗ ನಾನು ಗರಬಡಿದವನಂತೆ ನಿಂತಿದ್ದೆ ಆದಿನ, ನನ್ನದಕ್ಕಿಂತಲೂ ಆತನ ಕವನವೇ ನನಗೆ ಹೆಚ್ಚು ಇಷ್ಟವಾಯಿತು........ ಅಂದ ಹಾಗೆ ಇದು ನನ್ನ ಮೊತ್ತ ಮೊದಲ ಕವನ.

ಅಂದಹಾಗೆ ಅವನೂ ಸಾಲುಗಳನ್ನ ಅದೇ ಹಾಳೆಯ ಮೇಲೆ ಪೋಣಿಸಿದ ಮೇಲೆ, ನಾನು ಕೆಳಗೆ ಬರೆದಿದ್ದೆ...

ವ್ಯತಾಸ ಇಷ್ಟೇ.... ನಂದೊಂತರಾ ಪಲಾಯನ ಧೊರಣೆಯಾದರೆ... ನಿಂದೊಂತರಾ daringness ಕಣೋ..

Monday, December 7, 2009

Monday, November 23, 2009

ಆತ ಮಗ್ಗುಲು ಬದಲಾಯಿಸಿದಾಗ....

ಇದು ಸುಮ್ನೆ ಒಂದು comment....

ಅಂತ ಒಂದು ಮಗ್ಗುಲು ಬದಲಾವಣೆ ಎಲ್ಲರ ಜೀವನದಲ್ಲೂ ಇರುತ್ತೆ ಮತ್ತದು ಅನಿವಾರ್ಯ ಕೂಡ. ಒಂದರ್ದ ರಾತ್ರಿಯ ನಿದ್ದೆಯಲ್ಲೇ ಹತ್ತಾರು ಬಾರಿ ಮಗ್ಗುಲು ಬದಲಾಯಿಸುವ ನಾವು, ಒಂದೆಪ್ಪತ್ತು ವರ್ಷಗಳ ಜೀವನಕ್ಕಾಗಿ, ಜೀವನದಲ್ಲಿ ಮಗ್ಗುಲು ಬದಲಾಯಿಸಿದರೆ ಅದರಲ್ಲಿ ವಿಪರ್ಯಾಸವಿಲ್ಲ ಅಲ್ಲವೇ? ಒಂದಷ್ಟು ಹೊತ್ತಿನ ಒತ್ತುವಿಕೆಯ ನೋವಿಗಾಗಿಯಾದರು ಅದು ಬೇಕೆ ಬೇಕಲ್ಲ!!!

ಅದೇನೇ ಇರಲಿ. ಅಂತಹದೊಂದು ಬದಲಾವಣೆ, ಮುಂಜಾನೆಯ ಸೂರ್ಯ ಕಣ್ಣಿಗೆ ಚುಚ್ಚುವಾಗಿನ ಬೆನ್ನುಹಾಕುವಿಕೆಯಾಗಿರದೆ, ಹೊಸತನದ ಬೆಳಕ ನೋಡುವ ತವಕವಾಗಿರಲಿ.....




Friday, July 17, 2009

ನಿನ್ನ ಪ್ರೀತಿಯಲಿ.....(?!)

ರಮ್ಯನಿಸರ್ಗದ ಗುಪ್ತತೆಯಿರಲಿ,
ಸಪ್ತಸಾಗರಗಳ ಸುಪ್ತತೆಯಿರಲಿ,
ಭಾವಗಳಿಗೆಟಕದ ನಿರ್ಲಿಪ್ತತೆಯಿರಲಿ,
ಆದರೆ, ನಿರ್ಭಾವುಕಲಾಗದಿರು ಗೆಳತಿ.

ಪೂರ್ಣಚಂದಿರನ ಚೆಲುವಿರಲಿ,
ನಡುರಾತ್ರಿ ಆಗಸದ ಗೆಲುವಿರಲಿ,
ಅಲ್ಲೊಂದಷ್ಟು ತಾರೆಗಳ ಚಿತ್ತಾರವಿರಲಿ.
ಆದರೆ, ಸಿಡುಕಿ-ಗುಡುಗದಿರು ಗೆಳತಿ.

ಕಾನನದ ಕೋಗಿಲೆಯಿಂಚರದ ಇಂಪಿರಲಿ,
ಮುಂಜಾವ ತಂಗಾಳಿಯ ತಂಪಿರಲಿ,
ಹೊಸತನದ ನೈದಿಲೆಯ ಕಂಪಿರಲಿ,
ಆದರೆ, ಬಿರುಗಾಳಿಯಾಗದಿರು ಗೆಳತಿ.

ಗಿರಿಶಿಖರಗಳೆತ್ತರದ ಶ್ರೇಷ್ಟ್ಯವಿರಲಿ,
ಸಾಗರದ ರಸದಾಳದ ಇಷ್ಟವಿರಲಿ,
ರಸಭರಿತ ಭುವಿಯಂತ ಸಹನೆಯಿರಲಿ,
ಆದರೆ, ಸಿಹಿನೀರ ಒರತೆ ಬತ್ತಿಸದಿರು ಗೆಳತಿ.

ಹಳೆತನದ ಬೇರಿನ ಗಡುಸಿರಲಿ,
ಹೊಸತನದ ಚಿಗುರಿನ ಫಸಲಿರಲಿ,
ಬೆಳೆದ ಹೆಮ್ಮರದ ನೆರಳ-ಸೊಬಗಿರಲಿ,
ಆದರೆ, ಜಡಿಮಳೆಗೂ ಜರಿಯದಿರು ಗೆಳತಿ.

ತುಟಿಯಂಚಿನಲಿ ನಗು-ನಸುಗೆಂಪಗಿರಲಿ,
ಕಣ್ಣಂಚಿನಲಿ ಜಗದೊಲವೆಲ್ಲದರ ಮಂಪಿರಲಿ,
ಬದುಕು-ಭಾವದಲ್ಲೊಂದು ಚಿರ-ಹೊಳಪಿರಲಿ,
ಆದರೆ, ನಿನ್ನಲ್ಲೇ ನೀನು ಮತ್ಸರಿಸದಿರು ಗೆಳತಿ.

~: ೨೦-೦೬-೦೯ರಂದು ಮತ್ಸ್ಯಗಂಧ-ವೆಲ್ಲೋ ಸುರಂಗದೊಳಗೆ ನುಸುಳಿದಾಗ ಮೂಡಿದ ಮನದೆಸಳು.....

ಸುಮ್ನೆ ಇದ್ರ ಬಗ್ಗೆ....

ಸ್ನೇಹಿತರೇ,
೫-೬ blogಗಳನ್ನು ಒಟ್ಟಿಗೆ ತೆರೆಯಬೇಕೆಂಬ ಯೋಚನೆಯೊಂದು ಮೊಳೆತು ೩-೪ ತಿಂಗಳಾಯಿತು. ಆದರೇನು ಮಾಡಲಿ, Jobನ ಹುಡುಕಾಟ, interviewsನ ಪರದಾಟ, examನ ಹುಡುಗಾಟ, ಕೊನೆಗೊಮ್ಮೆ ಮುಂಬೈವರೆಗೊಂದು ಅಲೆದಾಟ ಇತ್ಯಾದಿಗಳ ತುರಾತುರಿಯಲ್ಲಿ blogನ ಉಸಾಬರಿಯಿಂದ ದೂರವಿರಬೇಕಾಯಿತು.

Simply ಒಂದು ಮಾತು!- Temporarily hack ಆಗಿದ್ದನ್ನು recover ಮಾಡಿದರೂ ಕೂಡಾ ಏನೂ ಬರೆಯಲಾಗಲಿಲ್ಲ. ಅದೇನೆ ಇರಲಿ, ಸದ್ಯಕ್ಕೆ ಈ ಒಂದು ಹೊಸ blog ತೆರೆದಿರುತ್ತೇನೆ..... ಅಂದ ಹಾಗೆ, ಅದೇಲ್ಲೋ live-link ಇದೆಯಂತೆ ಅಂತಿದ್ದೆ ಅಲ್ವಾ? ಅದು ಈಗ್ಲೂ ಇದ್ಯಾ-ಇಲ್ವಾ ಗೊತ್ತಿಲ್ಲ. Porn sitesನ್ನೆಲ್ಲ ಹುಡುಕೋ ತಾಳ್ಮೆಯಾಗ್ಲೀ, ಅಗತ್ಯವಾಗ್ಲೀ ನಂಗಿಲ್ಲ. ಅಂದಹಾಗೆ, ಬೆಲೆವೆಣ್ಣು ಕವನ ಅರ್ಧ-porn ಆಗುತ್ತಾ ನಂಗೊತ್ತಿಲ್ಲ. ಸಾಧ್ಯವಾದರೆ, ಬೆಲೆವೆಣ್ಣು-ಗೆ ಸಿಕ್ಕ commentsನ ಯಾವತ್ತಾದರೂ ನಿಂಜೊತೆ ಹಂಚ್ಕೋತೀನಿ. ಆದ್ರೆ, ಅಭಿಪ್ರಾಯ ಹೇಳಿದವರ ಹೆಸರು ಹೇಳಲಾರೆ.


ಹೊಸತನದಲ್ಲೇನು ಹೊಸತಿದೆ?-ಅಂದ್ರೆ...ಏನೂ ಇಲ್ಲ...ಸದ್ಯಕ್ಕೆ ಎಲ್ಲಾ ಹಳೇದೆ!!!

ಹೊಸತನವೇಕೆ?

ಸ್ನೇಹಿತರೇ,
Simply ಒಂದು ಮಾತಿನಲ್ಲಿ ಹಾಕುತ್ತಿದ್ದ ಬರಹಗಳೇ ೨-೩ ವರ್ಷಗಳಷ್ಟು ಹಳೆಯದು. ಕಳೆದೆರಡು ವರ್ಷಗಳ ಕಾಲ ಆಗೊಮ್ಮೆ-ಈಗೊಮ್ಮೆ ಎನ್ನುವಂತೆ ಏನೇನೋ ಹುಚ್ಚು ಗೀಚುವ ಗೀಳಿನಿಂದಲೂ, ಚೇಳುಕಚ್ಚಿದ ಮಂಗನಂತೆ ದೂರವುಳಿದಿದ್ದೆ. ಬರಹದಿಂದ ಪೂರ್ತಿ ಹೊರಗುಳಿದಿದ್ದೆ. ಭಾವನೆಗಳು ಬತ್ತಿಹೋದಂತಾಗಿದ್ದವು...... ಮತ್ತೇಕೋ ಬರೆಯುವಾಸೆ.... ಆದರೆ ಪದಗಳು ಸಿಗುತ್ತಿಲ್ಲ.... ಏನು ಬರೆಯಬೇಕೆಂದೂ ಗೊತ್ತಾಗುತ್ತಿಲ್ಲ... ಆದರೂ ಹೊಸತೇನೇನೋ ಬರೆಯುಂತಾಗಬೇಕೆಂದೇನೋ ಇದೆ. ಅಂತಹ ಕನಸಿನ ಕೂಸೇ ಈ 'ಹೊಸತನ'.
Just for change ಅಂತೀವಲ್ಲ...ಅದೇ ತರಹ, ಈ ಹೊಸತನ ಒಂದು ಹೊಸತನಕ್ಕಾಗಿ ಮಾತ್ರ....


ಕೂಸು ಹಸೆಯಲ್ಲೇ ಉಳಿಯುತ್ತಾ?
ಹೊಸತನದೆಡೆಗೆ ಹುರುಪಿಂದ ಬೆಳೆಯುತ್ತಾ??
..........................ಕಾಲ ನಿರ್ಧರಿಸುತ್ತೆ!!

Wednesday, July 15, 2009

ಬಯಕೆಗಳ ಮೀರಿ ಹಾರು......!!!

ಹಾರು ಹಕ್ಕಿಯೇ ಹಾರು ಬಾನೆತ್ತರಕೆ,
ಹಾರು, ಮುಗಿಲ ಮೇಲೇರಿ ಹಾರು,
ಹಿಂತಿರುಗಿ ನೋಡದಿರು, ಹಾರು ರವಿಯೆಡೆಗೆ,
ನಿನ್ನಾಸೆಗಳ ಗರಿಬಿಚ್ಚಿ, ಮನಮೆಚ್ಚಿ ಹಾರು,
ಆದರೂ...., ಗೂಡ ಮರೆಯಬೇಡ...!
ನೀನುಂಡ ಕಾಡ ಮರೆಯಬೇಡ.......!!
ನೀನಾಡಿದ ನಾಡ ಮರೆಯಬೇಡ.....!!!
ನೀಮಿಂದ ತೋಡ ಮರೆಯಬೇಡ....!!!!

ಹಾರು ಹಕ್ಕಿಯೇ ಹಾರು ದಿಗಂತದಾಚೆಗೆ,
ಹಾರು, ಗುಡ್ಡ-ಬೆಟ್ಟಗಳ ಮೀರಿ ಹಾರು,
ನೋವುಗಳೆಲ್ಲವ ಮರೆತು ಹಾರು, ಕಡಲದಾಟಿ,
ಮಧುರಭಾವನೆಗಳ ಮಾತ್ರ, ಹೃದಯಮೀಟಿ,
ಆದರೂ...... ನಿನ್ನವರ ಮರೆಯಬೇಡ...!
ತುತ್ತನಿತ್ತವರ ಮರೆಯಬೇಡ...............!!
ನಿನ್ನ ನೋವಿಗತ್ತವರ ಮರೆಯಬೇಡ.....!!!
ನಿನ್ನ ಹೊತ್ತವಳ, ಹೆತ್ತವರ ಮರೆಯಬೇಡ!!!!

ನೀನಿಂದು ಉಬ್ಬಿರಬಹುದು, ಕೊಬ್ಬಿರಬಹುದು,
ಹೊಸಲೋಕದೊಳಗೊಬ್ಬನಾಗಿ ಉಳಿಯಬಹುದು,
ಆದರೂ ಮರೆಯದಿರು-ನೀನಲ್ಲಿ "ಪರಕೀಯ".....!
ಹೊಸಲೋಕದಲ್ಲೆಂದೂ ನೀನು "ಹೊಸಬ"......!!
ಮುಂದೊಮ್ಮೆ ಮನಬಿಚ್ಚಿ ಹಾರಬಹುದು,
ಈ ಭುವಿಯೆಡೆಗೆ, ದಿಗಂತದೀಚೆಗೆ,
ಅದಕ್ಕಾದರೂ ಈ ಗೂಡ ಮರೆಯದಿರು,
ಈ ಕಾಡು, ಗೂಡು ನಿನಗಾಗಿ ಕಾಯುವುದು!!

~:ಇದು
ಮನೆ ಬಿಟ್ಟು ದೇಶ ಬಿಟ್ಟು, ಕೊನೆಗೆ ಕಲಿತ ಮೂಲ ವಿಧ್ಯೆಯನ್ನೂ ಬಿಟ್ಟು ಸುಮ್ನೆ ಜೀವಿಸುತ್ತೇವೆ ಅನ್ನೋ ಮನೋಭಾವದವರಿಗಾಗಿ.....